Monday 28 July 2014

ಮಂಡಕ್ಕಿಯ ಬೆಲೆ

         ನಾನೊಮ್ಮೆ ಶೃಂಗೇರಿಗೆ ತೆರಳಿದ್ದೆ . ಅಲ್ಲಿನ ಮೀನುಗಳಿಗೆ ತಿನ್ನಲು ಎರಡು ಪ್ಯಾಕೇಟು ಮಂಡಕ್ಕಿ ಹೊತ್ತು ತುಂಗೆಯ ಬಳಿ ನಿಂತಿದ್ದೆ . ಮಂಡಕ್ಕಿಯನ್ನು ನದಿಗೆ ಎಸೆಯುತ್ತಾ  ಒಂದು ಪ್ಯಾಕೇಟು ಖಾಲಿಯಾಯಿತು . ಮತ್ತೊಂದು ಪ್ಯಾಕೇಟು ತೆರೆಯಲು ಅಣಿಯಾದೆ . ಆಗ ಬಳಿಗೆ ಬಂದ ಒಬ್ಬ ಅಜ್ಜ ನನ್ನೆದುರು ಕೈ ಚಾಚಿದರು . ಅವರೂ ಮೀನಿಗೆ ನೀಡಲೆಂದು ಅವರ  ಬೊಗಸೆಗಳಿಗೂ ಮಂಡಕ್ಕಿ ಸುರಿದೆ. ನಾನು ನನ್ನ ಕೈಯಲ್ಲಿ ಸುರಿದುಕೊಳ್ಳುವಷ್ಟರಲ್ಲಿ ಅವರು ನಾಪತ್ತೆಯಾಗಿದ್ದರು . ಸುತ್ತ ಕಣ್ಣಾಡಿಸಿದರೆ 'ಕಪ್ಪೆ ಶಂಕರ ' ಮಠದ ಹಿಂದೆ ಗಬಗಬ ತಿನ್ನುತ್ತಿದ್ದರು. ಕರುಳು ಚುರುಕ್ಕೆನಿಸಿತು. ನನ್ನ ಕೈಯಲ್ಲಿ ಉಳಿದ ಮಂಡಕ್ಕಿಯನ್ನು ಅಜ್ಜನಿಗೆ ನೀಡಿ ಮೆಟ್ಟಿಲು ಹತ್ತಿ ಬಂದೆ. 

                                                                          - ಕಾವ್ಯಮಯಿ 

Monday 31 March 2014

ಹಳದಿ ಟಿ -ಶರ್ಟಿನ ಆತ

           ದಿನಾ  ಸಂಜೆ ಹಳದಿ ಟಿ ಶರ್ಟ್  ಹಾಕಿ ವಾಕಿಂಗ್ ಬರುತ್ತಿದ್ದ ಅವನನ್ನು ಬೀಚ್ ಬೆಂಚ್ ಮೇಲೆ ಕೂತು ನೋಡುತ್ತಿದ್ದೆ. ಅದೆಂಥ ಸೆಳೆತವೋ ಅರಿಯದು. ಆತ ಇಂದು ಬಂದಿರಲಿಲ್ಲ ಕನ್ನೆರೆಅದು ಕಾಯುತ್ತಿದ್ದುದು ಆ ಹಳದಿ ಟಿ ಶರ್ಟ್ ಗಾಗಿ . ಕಡೆಗೂ ಬರಲೇ ಇಲ್ಲ. ನಾನೂ ಸ್ವಲ್ಪ ಮಂಕು ! ಆತ  ನೀಲಿ ಟಿ ಶರ್ಟ್ ತೊಟ್ಟು ಪಕ್ಕದಲ್ಲೇ ಕೂತು ಶೂ ಸರಿಮಾಡಿ ಹೋದದ್ದು ನನಗೆ  ಅರಿವಾಗಲೇ ಇಲ್ವಲ್ಲ!!


Monday 24 February 2014

ಆಪ್ಯ

             ಈಸಿಚೇರಿನಲ್ಲಿ ಬೆನ್ನೊರಗಿಸಿ  ಕೂತ ಹಳೆಯದೊಂದು ಅನುಭವ. ಹೆಂಡತಿ,ಮಗ, ಮಗಳು, ಅಣ್ಣ ತಮ್ಮ, ಅವರು ಇವರು ಎಲ್ಲರೂ ...  ನೆನಪಲ್ಲಿ ಮೊನ್ನೆ ಮಾರಿದ ತಾನೇ ನೆಟ್ಟು ಬೆಳೆಸಿದ ತೋಟ... ಅಲ್ಲಿನ  ಬಾಳೆಯ ಗಿಡ ಹಣ್ಣು ಬಿಟ್ಟು  ಗೊನೆ ಮಾಗಿ ಬಾಳೆಯ ನಡು ಮುರಿಯದಂತೆ ಕೊಟ್ಟ ಊತ. ಗೊನೆ ಮಾರಿದ ಮೇಲೆ ಮರೆತ ಗಿಡ. ಮಳೆಯೊಂದು ಮುಗಿದು ವಿರಾಮದ ಹನಿಗಳ ಹರಿಕೆ. ಮಂದಕಣ್ಣಿನೆರಡು ತುದಿಯಲ್ಲೂ ಒರೆಸಿ ಒರೆಸಿ ಉಮ್ಮಳಿಸಿ ಬರುವ ಹೃದಯದ ವೇದನೆ.. ಬಯತ್ತಿರುವುದು ಆಪ್ಯ ಹೃದಯ. ಅತ್ತಿತ್ತ ಕೈಯ್ಯಾಡಿಸಲು ಸಿಗುವುದು ತನ್ನದೆನಿಸಿದ್ದ ಊರುಗೋಲು. ನಡುಗುವ ಕೈ ತಾಗಿ ಕೋಲು ಎರಡಡಿ ದೂರ ಬಿದ್ದಿದೆ. ಎದ್ದು ಹೋಗಿ ಹೆಕ್ಕಲು ಶಕ್ತಿಯಿಲ್ಲ. ಆಪ್ಯವಾದುದೊಂದು ಬಿದ್ದು ಕಳಕೊಂಡಷ್ಟು ಭಾರ.... 

                                                                    - ಕಾವ್ಯಮಯಿ 

ಸಭ್ಯ

     
     ಗರಿ ಗರಿ ಇಸ್ತ್ರಿಯ ಬಟ್ಟೆ ಕಳಚಿಟ್ಟು ಸಮಾಜದ  ಗಣ್ಯತನದ ಮೊಹರೊತ್ತಿದ್ದವ 'ಕೆಲಸ' ಮುಗಿಸಿ  ಮತ್ತೆ ಅದೇ ಇಸ್ತ್ರಿಯುಟ್ಟು ಗಲ್ಲಿಯಿಂದ ಹೊರನಡೆಯುತ್ತಾನೆ. ಈಗವನು ಮತ್ತೆ ಸಭ್ಯ! 
                                        -ಕಾವ್ಯಮಯಿ 

Sunday 23 February 2014

ಗೂಡು

       
   
            ಮನೆಯ ತೋಟದಲ್ಲೊಂದು ಹಕ್ಕಿ ಸುಂದರವಾದ ಗೂಡು ಕಟ್ಟುತ್ತಿತ್ತು . ದಿನವೂ ಈ ಆರ್ಕಿಟೆಕ್ಚರಿ ನೋಡಿಕೊಂಡು ಬರುತ್ತಿದ್ದೆ.  ಒಂದೊಂದೇ ಕಡ್ಡಿಗಳನ್ನು ಕೊಕ್ಕಿನಿಂದ ಹೆಕ್ಕಿ ಹೆಕ್ಕಿ ಅರಮನೆ ಕಟ್ಟಿದ ಹಕ್ಕಿ ಸಂಗಾತಿಯ ಜೊತೆಗೂಡಿತು. ಕೆಲದಿನಗಳಲ್ಲಿ ಐದಾರು ಮೊಟ್ಟೆಗಳು. ಮತ್ತ್ಹಲವು ದಿನದಲ್ಲಿ ಚೀಂವ್ ಗುಟ್ಟುತ್ತಿದ್ದವು ಮರಿಗಳು. ರೆಕ್ಕೆ ಬಲಿತು ಹಾರಿದವು ಗೂಡನ್ನು ಇಲ್ಲಿಯೇ ಬಿಟ್ಟು. ಭ್ರಮವೆನಿಸಿದ ಬದುಕು- ತಾತ್ಕಾಲಿಕ ಬದುಕಲ್ಲೊಂದು ಶಾಶ್ವತಕ್ಕಾಗಿ ಓಡಾಡುವ ಆತುರ. ಹಕ್ಕಿ ಬಿಟ್ಟು ಹೋದ ಆ ಗೂಡೂ ಕಳಿಸಿತು ಬಹಳಷ್ಟು ಪಾಠ...

                                                                                                - ಕಾವ್ಯಮಯಿ